ಆರ್ಥೋರಾಂಬಿಕ್ ವರ್ಗ
	
ಖನಿಜಗಳು ಸ್ಫಟಿಕಾಕಾರಗೊಳ್ಳುವ ಆರು ವರ್ಗಗಳಲ್ಲಿ ಒಂದು. ಇದರಲ್ಲಿ ಮೂರು ಬೇರೆ ಬೇರೆ ಉದ್ದವುಗಳುಳ್ಳ ಮತ್ತು ಸಮಕೋನ ಸಂಬಂಧವಿರುವ ಸ್ಫಟಿಕಾಕ್ಷಗಳಿವೆ. ಸ್ಫಟಿಕದ ಮೇಲಿನ ತುದಿಯಿಂದ ಕೆಳ ತುದಿಯವರೆಗೆ ಹಾದುಹೋಗಿರುವ ಅಕ್ಷವೇ ಊಧ್ರ್ವಾಕ್ಷ. ಉಳಿದೆರಡು ಸಮತಲ ಅಕ್ಷಗಳಲ್ಲಿ, ಉದ್ದವಾಗಿ ಎಡದಿಂದ ಬಲಕ್ಕೆ ಹಾದು ಹೋಗುವುದನ್ನು ಮ್ಯಾಕ್ರೋ ಅಕ್ಷವೆಂದೂ ಕಿರಿದಾಗಿ ಹರಳಿನ ಹಿಂದಿನಿಂದ ಮುಂದಕ್ಕೆ ಹಾದು ಬರುವುದನ್ನು ಬ್ರ್ಯಾಕಿ ಅಕ್ಷವೆಂದೂ ಕರೆಯುತ್ತೇವೆ. ಸ್ಫಟಿಕ ಬೆರೈಟ್ ಖನಿಜ ಈ ವರ್ಗದ ಒಂದು ಮಾದರಿ. ಇದರಲ್ಲಿ ಸಮಸೂತ್ರ ಕೇಂದ್ರವೂ ಮೂರು ಉಪಸಮಸೂತ್ರ ಕ್ಷೇತ್ರಗಳೂ ಮೂರು ದ್ವಿಸಮಸೂತ್ರ ಅಕ್ಷಗಳೂ ಇವೆ. ಸ್ಫಟಿಕಾಕ್ಷಗಳನ್ನಾಗಿ ಮೂರು ದ್ವಿಸಮಸೂತ್ರ ಅಕ್ಷಗಳನ್ನೇ ಚುನಾಯಿಸಬೇಕು. ಆರ್ಥೋರಾಂಬಿಕ್ ವರ್ಗದಲ್ಲಿ ಏಳು ವಿವಿಧ ಸ್ವರೂಪಗಳಿವೆ. ಪಿರಮಿಡ್ಡು  ಈ ವರ್ಗದ ಮೂಲ ಸ್ವರೂಪ. ಇದರಲ್ಲಿ ಎಂಟು ಸದೃಶ ಸಮದ್ವಿಬಾಹು ತ್ರಿಭುಜಗಳಿದ್ದು ಪ್ರತಿಮುಖವೂ ಮೂರು ಸ್ಫಟಿಕಾಕ್ಷಗಳನ್ನು ಮೂಲಮಾನದಲ್ಲಿ ಸಂಧಿಸುತ್ತದೆ. ಬ್ರ್ಯಾಕಿಡೋಮ್ ( ಮತ್ತು ಮ್ಯಾಕ್ರೋಡೋಮ್‍ಗಳಲ್ಲಿ  ನಾಲ್ಕು ಸದೃಶ ಸಮದ್ವಿಬಾಹು ತ್ರಿಭುಜಗಳಿದ್ದು ಪ್ರತಿಮುಖವೂ ಸಮತಲ ಅಕ್ಷಗಳಲ್ಲಿ ಒಂದಕ್ಕೆ ಸಮಾಂತರವಾಗಿ ಮತ್ತು ಮತ್ತೊಂದಕ್ಕೂ ಶೀರ್ಷಾಕ್ಷಕ್ಕೂ ಮೂಲಮಾನದಲ್ಲಿ ಮುಟ್ಟುತ್ತದೆ. ಪ್ರಿಸಂನಲ್ಲಿ  ನಾಲ್ಕು ಆಯಾಕಾರದ ಸದೃಶ ಮುಖಗಳಿದ್ದು ಪ್ರತಿಮುಖವೂ ಸಮತಲ ಅಕ್ಷಗಳನ್ನು ಮೂಲಮಾನ ದೂರದಲ್ಲಿ ಸಂಧಿಸಿ, ಶೀರ್ಷಾಕ್ಷಕ್ಕೆ ಸಮಾಂತರವಾಗಿರುತ್ತದೆ. (ಬ್ರ್ಯಾಕಿಪಿನಕೈಡ್) ಎರಡು ಆಯಾಕರದ ಸದೃಶ ಮುಖಗಳಿದ್ದು, ಪ್ರತಿಮುಖವೂ ಬ್ರ್ಯಾಕಿ ಮತ್ತು ಶೀರ್ಷಾಕ್ಷಗಳಿಗೆ ಸಮಾಂತರವಾಗಿಯೂ, ಮ್ಯಾಕ್ರೋ ಅಕ್ಷವನ್ನು ಮೂಲಮಾನದಲ್ಲೂ ಸಂಧಿಸುತ್ತದೆ. ಮ್ಯಾಕ್ರೊಪಿನಕೈಡ್‍ನಲ್ಲೂ  ಎರಡು ಆಯಾಕಾರದ ಸದೃಶ ಮುಖಗಳಿದ್ದು, ಪ್ರತಿಮುಖವೂ ಬ್ರ್ಯಾಕಿ ಅಕ್ಷವನ್ನು ಮೂಲಮಾನದಲ್ಲಿ ಸಂಧಿಸಿ ಮ್ಯಾಕ್ರೋ ಮತ್ತು ಶೀರ್ಷಾಕ್ಷಗಳಿಗೆ ಸಮಾಂತರವಾಗಿರುತ್ತದೆ. ಬೇಸಲ್ ಪ್ಲೇನ್‍ನಲ್ಲಿ  ಎರಡು ಆಯಾಕಾರದ ಸದೃಶ ಮುಖಗಳಿದ್ದು, ಸಮಾಂತರವಾಗಿದ್ದು, ಶೀರ್ಷಾಕ್ಷಕ್ಕೆ ಮೂಲಮಾನದಲ್ಲಿ ಸಂಧಿಸುತ್ತವೆ. ಇದಲ್ಲದೆ ಸಹಜವಾಗಿರಬೇಕಾದ ಸದೃಶ ಮುಖಗಳಲ್ಲಿ ಅರ್ಧ ಸಂಖ್ಯೆ ಮಾತ್ರವಿರುವ ಎಪ್ಸ್ಯೋಮೈಟ್ ಮಾದರಿ ಹೆಮಿಹಿಡ್ರಲ್ ಸ್ಫಟಿಕಗಳೂ ಅಪೂರ್ಣ ರೂಪಗೊಂಡಿರುವ ಕ್ಯಾಲಮೀನ್ ಮಾದರಿ ಹೆಮಿ ಮಾರ್ಫಿಕ್ ಸ್ಫಟಿಕಗಳೂ ಈ ವರ್ಗದಲ್ಲಿವೆ.

(ಎಂ.ಎನ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ